ಕೂಪರ್ಯಾಂತಸ್

ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದ ಜೆóಫೀರ್ಯಾಂತಾಸ್ ಮತ್ತು ಕೂಪರಿಯ ಎಂಬೆರಡು ಜಾತಿಗಳನ್ನು ಅಡ್ಡ ಹಾಯಿಸಿ ಪಡೆಯಲಾಗಿರುವ ಒಂದು ಅಂತರ್ಜಾತಿಯ ಮಿಶ್ರ ತಳಿ. ಲಶುನ ಸಸ್ಯಗಳಲ್ಲಿ ಒಂದಾದ ಇದರಲ್ಲಿ ಸುಂರವಾದ ಹೂ ಬಿಡುವ ಅನೇಕ ಪ್ರಬೇಧಗಳಿವೆ. ಇವು ಬಿಳಿ, ನಸುಗೆಂಪು, ಗುಲಾಬಿ, ಕಿತ್ತಳೆ, ಹಳದಿ ಇತ್ಯಾದಿ ವರ್ಣರಂಜಿತವಾದ ಹೂಗಳನ್ನು ಬಿಡುತ್ತವೆ.

ತನ್ನ ಪಿತೃಜಾತಿಯಾದ ಜೆóಫೀರ್ಯಾಂತಾಸ್ ಅನ್ನೆ ಬಹುವಾಗಿ ಹೋಲುವ ಕೂಪರ್ಯಾಂತಸ್ ತನ್ನ ಹೂಗಳ ಬಣ್ಣದಲ್ಲಿ ಹೆಚ್ಚು ವೈವಿಧ್ಯಮಯ. ಅಲ್ಲದೆ ಹೂಗಳ ಸಂಖ್ಯೆಯೂ ಹೆಚ್ಚು. ಜೆóಫೀರ್ಯಾಂತಸ್‍ನಂತೆಯೇ ಇದೂ ಕೂಡ 4"-6" ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಹೊಳೆಯುವ ಮತ್ತು ಸೊಗಸಾದ ಹುಲ್ಲಿನ ಎಸಳಿನಂತ ಎಲೆಗಳಿವೆ. ಹೂಗಳು ಸಸ್ಯದ ಮಧ್ಯದಿಂದ ಹೊರಡುವ ದಿಂಡಿನಂಥ ಹೂಗೊಂಚಲಿನ (ಸ್ಕೇಪ್) ತುದಿಯಲ್ಲಿ ಸಮಾವೇಶಗೊಂಡಿವೆ. ಮಳೆಗಾಲದ ಆದಿಯಲ್ಲಿ ಮಳೆ ಬಿದ್ದ ಎರಡು ದಿನಗಳಲ್ಲಿ ಹೂ ಅರಳಿ ಶೋಭೆಯನ್ನುಂಟುಮಾಡುತ್ತದೆ. 

ಕೂಪರ್ಯಾಂತಸ್ ತನ್ನ ಅಂದವಾದ ಹೂಗಳಿಂದಾಗಿ ಒಂದು ಮುಖ್ಯವಾದ ಹಾಗೂ ಜನಪ್ರಿಯವಾದ ಅಲಂಕಾರ ಸಸ್ಯವೆನಿಸಿದೆ. ಅಂಚು ಸಸ್ಯವಾಗಿ ಬೆಳೆಸುವುದೇ ವಾಡಿಕೆ. ಲಶುನಗಳಿಂದ ಇದನ್ನು ವೃದ್ಧಿಸುತ್ತಾರೆ.		
(ಬಿ.ಎ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ